
ದೇವದುರ್ಗ, ಮೇ.6-ದೇವದುರ್ಗ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಮಹೇಶ್ವರಿ ಅವರು, ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅದರಂತೆ, ತಾಲೂಕಿನ ೩೩ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಮಹಿಳಾ ಗ್ರಾಮ ಸಭೆಗಳನ್ನು ನಡೆಸಬೇಕು, ಬಾಕಿ ಇರುವ ಜೇಸ್ಕಮ್ ಹಣವನ್ನು ಕೂಡಲೇ ಪಾವತಿಸಬೇಕು ಎಂದು ಸೂಚಿಸಿದರು.
ವಸತಿ ಯೋಜನೆಯ ಸಮೀಕ್ಷೆಯು ಮೇ ೧೫ ರವರೆಗೆ ನಡೆಯಲಿದ್ದು, ಯಾವುದೇ ಅರ್ಹ ಮನೆಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸೂಚನೆ ನೀಡಿದರು. ಪ್ರತಿದಿನ ತೆರಿಗೆ ವಸೂಲಿ ಮಾಡಬೇಕು, ಸಕಾಲದಲ್ಲಿ ಬಂದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಮತ್ತು ಪ್ರತಿ ತಿಂಗಳು ಸಾಮಾನ್ಯ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು. ಈ ಎಲ್ಲಾ ಮಾಹಿತಿಯನ್ನು ಪಂಚತoತ್ರ ತಂತ್ರಾoಶದಲ್ಲಿ ದಾಖಲಿಸಬೇಕು ಎಂದು ತಿಳಿಸಿದರು.ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಆದೇಶ ಮತ್ತು ಪಾವತಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು. ಕಸ ಸಂಗ್ರಹಣೆ ಮತ್ತು ವಿಂಗಡಣೆ ಮಾಡುವ ವಾಹನಗಳ ವಿಮೆ ಹಾಗೂ ಚಾಲಕರ ಗೌರವಧನವನ್ನು ಕೂಡಲೇ ಪಾವತಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ತಿಂಗಳ ೨೪ ಮತ್ತು ೨೫ ರಂದು ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಮಟ್ಟದ ತಂಡವು ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಕಡ್ಡಾಯವಾಗಿ ೭ ರಿಜಿಸ್ಟರ್‌ಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಹಾಜರಾತಿಯನ್ನು ಎನ್.ಎಂ.ಎo.ಎಸ್ ಆಪ್‌ನಲ್ಲಿ ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ನಮೂದಿಸಬೇಕು. ತಪ್ಪಿದಲ್ಲಿ ಸಂಬoಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹೇಶ್ವರಿ ಅವರು ಎಚ್ಚರಿಕೆ ನೀಡಿದರು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘವು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರ್ವಾಹಕ ಅಧಿಕಾರಿಗಳು, ನೌಕರರ ಮನವಿಗಳನ್ನು ಆಲಿಸಿ, ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ ಮತ್ತು ಸಿ.ಐ.ಟಿ.ಯು ಸಂಘಟನೆಯ ಗಿರಿಯಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.