
ದೇವದುರ್ಗ,ಏ.3೦- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಶಾಲಾ ಅವಧಿಯಲ್ಲಿ ನಡೆಯುತ್ತಿರುವ ಅನಧಿಕೃತ ನವೋದಯ ಟ್ಯೂಷನ್ ತರಬೇತಿ ಮತ್ತು ವಸತಿ ಶಾಲೆಗಳನ್ನು ಮುಚ್ಚುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಈ ಕುರಿತು ತಾಲೂಕು ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ, ದೇವದುರ್ಗ ತಾಲೂಕಿನ ಗದ್ದೂರು, ಜಾಲಹಳ್ಳಿ, ಅರಕೇರ ವಲಯ ಸೇರಿದಂತೆ ಇಡೀ ತಾಲೂಕಿನಲ್ಲಿ ಮತ್ತು ರಾಯಚೂರು ಜಿಲ್ಲೆಯಾದ್ಯಂತ ಅನಧಿಕೃತ ನವೋದಯ ತರಬೇತಿ ಮತ್ತು ವಸತಿ ಶಾಲೆಗಳು ನಡೆಯುತ್ತಿವೆ. ಈ ವಿಷಯವನ್ನು ಕಳೆದ ಒಂದೂವರೆ ವರ್ಷದಿಂದ ತಾಲೂಕು ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ. ಈ ಅನಧಿಕೃತ ಸಂಸ್ಥೆಗಳಿAದ ಅಧಿಕಾರಿಗಳಿಗೆ ಮಾಸಿಕವಾಗಿ ಹಣ ಸಂದಾಯವಾಗುತ್ತಿರಬಹುದು ಎಂಬ ಅನುಮಾನವನ್ನು ವೇದಿಕೆ ವ್ಯಕ್ತಪಡಿಸಿದೆ.
ಶಾಲಾ ಅವಧಿಯಲ್ಲಿ ನಡೆಯುತ್ತಿರುವ ಈ ಅನಧಿಕೃತ ತರಬೇತಿ ಮತ್ತು ವಸತಿ ಶಾಲೆಗಳು ಯಾವುದೇ ದಾಖಲೆಗಳಿಲ್ಲದೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಮಕ್ಕಳಿಂದ ವರ್ಷಕ್ಕೆ ಸುಮಾರು ೮೦,೦೦೦ ರೂಪಾಯಿ ಶುಲ್ಕ ವಸೂಲಿ ಮಾಡುತ್ತಿವೆ. ಇದು ಹಗಲು ದರೋಡೆಯಾಗಿದೆ ಎಂದು ವೇದಿಕೆ ಟೀಕಿಸಿದೆ. ಸರ್ಕಾರವೇ ೬ನೇ ತರಗತಿಯಿಂದ ವಸತಿ ಶಾಲೆಗಳನ್ನು ನಡೆಸುತ್ತಿರುವುದು ಮಕ್ಕಳ ಹಿತದೃಷ್ಟಿಯಿಂದ ಉತ್ತಮವಾಗಿದೆ. ಆದರೆ ಈ ಅನಧಿಕೃತ ವಸತಿ ಶಾಲೆಗಳು ಸರ್ಕಾರದ ಅನುಮತಿ ಪಡೆಯದೆ ಕೇವಲ ಹಣ ಗಳಿಸುವ ಉದ್ದೇಶದಿಂದ ೩ನೇ ತರಗತಿಯ ಮಕ್ಕಳಿಂದಲೇ ವಸತಿ ಸೌಲಭ್ಯ ನೀಡಿ ಶಾಲೆ ನಡೆಸುತ್ತಿವೆ. ಇದರಿಂದ ಸರ್ಕಾರದ ಮಧ್ಯಾಹ್ನದ ಬಿಸಿಯೂಟ, ಬಾಳೆಹಣ್ಣು, ಮೊಟ್ಟೆ, ಹಾಲು, ಬಟ್ಟೆ, ಪಠ್ಯ ಪುಸ್ತಕದಂತಹ ಯೋಜನೆಗಳು ವ್ಯರ್ಥವಾಗುತ್ತಿವೆ. ಮಕ್ಕಳು ಅನಧಿಕೃತ ಶಾಲೆಗಳಲ್ಲಿ ಬಂಧಿಯಾಗಿದ್ದು, ಸರ್ಕಾರಿ ಸೌಲಭ್ಯಗಳು ಆ ಶಾಲೆಗಳ ಮುಖ್ಯಸ್ಥರ ಪಾಲಾಗುತ್ತಿವೆ ಎಂದು ದೂರಿದರು.
ದೇವದುರ್ಗ ತಾಲೂಕಿನಲ್ಲಿ ಎಲ್ಲಿ ಅನಧಿಕೃತ ವಸತಿ ಶಾಲೆಗಳು ಮತ್ತು ಕೋಚಿಂಗ್ ಶಾಲೆಗಳಿವೆ ಎಂದು ಇಲಾಖೆಯ ಅಧಿಕಾರಿಗಳಿಗೆ ತಿಳಿದಿದ್ದರೂ, ಅವರು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಆದ್ದರಿಂದ, ಮೇಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಥವಾ ಸ್ವತಃ ಜಿಲ್ಲಾಡಳಿತವೇ ಮಧ್ಯಪ್ರವೇಶಿಸಿ ಸರ್ಕಾರಿ ಶಾಲೆಗಳನ್ನು ರಕ್ಷಿಸಬೇಕು. ಸರ್ಕಾರದ ಅನುಮತಿ ಪಡೆದ ಶಾಲೆಗಳಿಗೆ ಮತ್ತು ಸರ್ಕಾರಿ ಯೋಜನೆಗಳ ಪೋಲಾಗುವಿಕೆಯನ್ನು ತಡೆದು ಸರ್ಕಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಶಾಲಾ ಪ್ರಾರಂಭದ ಸಮಯ ಇದಾಗಿರುವುದರಿಂದ, ಕೂಡಲೇ ತಮ್ಮ ಇಲಾಖೆಯ ಮೂಲಕ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಅನಧಿಕೃತ ನವೋದಯ ಕೋಚಿಂಗ್ ಸೆಂಟರ್ ಗಳಿಗೆ ಕಡಿವಾಣ ಹಾಕಬೇಕು. ಸರ್ಕಾರಿ ಶಾಲೆಗಳೊಂದಿಗೆ ಸರ್ಕಾರಿ ಯೋಜನೆಗಳನ್ನು ಸಹ ರಕ್ಷಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಗುರುನಾಥ ರೆಡ್ಡಿ, ಭೀಮಣ್ಣ ನಾಯಕ, ನಂದಪ್ಪ ಪಿ ಮಡ್ಡಿ ಸೇರಿದಂತೆ ಹಲವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.