
ನವದೆಹಲಿ,ಏ.13- ದೇಶದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿಗಳು ಮಸೂದೆಗಳಿಗೆ ಒಪ್ಪಿಗೆ ನೀಡಲು ಸುಪ್ರೀಂ ಕೋರ್ಟ್ , ಮೂರು ತಿಂಗಳ ಗಡುವು ನೀಡಿದ್ದು ಕುತೂಹಲ ಕೆರಳಿಸುವಂತೆ ಮಾಡಿದೆ.
‘ತಮಿಳುನಾಡು ರಾಜ್ಯಪಾಲರು’ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದು ರಾಷ್ಟ್ರಗಳು ಸಂವಿಧಾನದ 201 ನೇ ವಿಧಿಯ ಪ್ರಕಾರ ಕಾರ್ಯನಿರ್ವಹಿಸಲು ಸುಪ್ರೀಂ ಕೋರ್ಟ್ ಸಮಯ ಮಿತಿ ನಿಗದಿಪಡಿಸಿದೆ, ರಾಜ್ಯಪಾಲರು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿದ ಮಸೂದೆಗಳ ಕುರಿತು ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರನ್ನೊಳಗೊಂಡ ಪೀಠ, “ಅಂತಹ ಉಲ್ಲೇಖವನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳ ಅವಧಿಯಲ್ಲಿ ರಾಜ್ಯಪಾಲರು ತಮ್ಮ ಪರಿಗಣನೆಗೆ ಕಾಯ್ದಿರಿಸಿದ ಮಸೂದೆಗಳ ಕುರಿತು ರಾಷ್ಟ್ರಪತಿಗಳು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಹೇಳಿದೆ
ಕೇರಳ, ಪಂಜಾಬ್, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ಹಲವಾರು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳು ಆಯಾ ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡುವುದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳಿಗೆ ಮಸೂದೆ ಅಂಗೀಕಾರ ಮಾಡಲು ಮೂರು ತಿಂಗಳ ಗಡುವು ನೀಡಿ ತೀರ್ಪು ಪ್ರಕಟಿಸಿದೆ
ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ಅಂಗೀಕಾರವಾದ ಮಸೂದೆಗಳನ್ನು ಅಂಗೀಕರಿಸದೆ ತಡೆಹಿಡಿಯಲಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರ , ರಾಜ್ಯಪಾಲ ರವಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದು ಅದರ ವಿಚಾರಣೆ ವೇಳೆ ನ್ಯಾಯಪೀಠ ಈ ಆದೇಶ ನೀಡಿದೆ.
ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ಸಂಬಂಧಪಟ್ಟ ರಾಜ್ಯಗಳು ನ್ಯಾಯಾಲಯದ ಮೊರೆ ಹೋಗಬಹುದು. ಸಮಂಜಸವಾದ ಸಮಯದೊಳಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ ನ್ಯಾಯಾಲಯ ಖಂಡಿತವಾಗಿಯೂ ಸುಮ್ಮನಿರುವುದಿಲ್ಲ ಎಂದು ತಾಕೀತು ಮಾಡಿದೆ.
ಸುಪ್ರೀಂ ಕೋರ್ಟ್ ತನ್ನ 415 ಪುಟಗಳ ತೀರ್ಪಿನಲ್ಲಿ ಅದಾದ ನಂತರವೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಇದಕ್ಕೆ ಕಾರಣಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ತಿಳಿಸುವುದು ಕಡ್ಡಾಯವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂಲಕ ರಾಜ್ಯಪಾಲ ರವಿ ವಿರುದ್ದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ತಮಿಳುನಾಡು ಸರ್ಕಾರಕ್ಕೆ ಜಯ ಸಿಕ್ಕಿದೆ.
ಯಾವುದೇ ರಾಜ್ಯದ ರಾಜ್ಯಪಾಲರು ಉಲ್ಲೇಖಿಸುವ ಮಸೂದೆಗಳ ಬಗ್ಗೆ ರಾಷ್ಟ್ರಪತಿಗಳು ನಿರ್ಧರಿಸಲು ಒಂದು ಸಮಯವನ್ನು ನಿಗದಿಪಡಿಸಿದೆ. ರಾಜ್ಯಪಾಲರು ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮಸೂದೆಗಳ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಮತ್ತು ಅವರ ಕ್ರಮಗಳಿಗೆ ಒಂದರಿಂದ ಮೂರು ತಿಂಗಳ ಕಾಲಾವಧಿಯನ್ನು ನಿಗದಿಪಡಿಸಿದ ಸುಪ್ರೀಂ ಕೋರ್ಟ್ ಕೆಲವು ದಿನಗಳ ನಂತರ ಇದು ಬಂದಿದೆ.
ಕೇರಳ, ಪಂಜಾಬ್, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ಹಲವಾರು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳು ಆಯಾ ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡುವುದರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದರಿಂದ ಈ ತೀರ್ಪು ಮಹತ್ವ ಪಡೆದುಕೊಂಡಿದೆ.
ನಿರ್ದಿಷ್ಟ ಅವಧಿಯಲ್ಲಿ ರಾಷ್ಟ್ರಪತಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ರಾಜ್ಯಗಳು ರಿಟ್ ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.”ಸಾಂವಿಧಾನಿಕ ಪ್ರಾಧಿಕಾರ ತನ್ನ ಕೆಲವನ್ನು ಸಮಂಜಸವಾಗಿ ಸಮಯದೊಳಗೆ ನಿರ್ವಹಿಸದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಅಧಿಕಾರಹೀನವಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ
- ದೇಶದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿಗಳು ಮಸೂದೆಗಳಿಗೆ ಒಪ್ಪಿಗೆ
- ತಮಿಳುನಾಡು ರಾಜ್ಯಪಾಲರ ವಿರುದ್ಧದ ಪ್ರಕರಣ
- ರಾಜ್ಯ ಸರ್ಕಾರಕ್ಕೆ ಗೆಲುವು
- 3 ತಿಂಗಳೊಳಗೆ ಅಗತ್ಯ ಕ್ರಮ ಕೈಗೊಳ್ಳಲು ಕಾಲ ನಿಗದಿ
- ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್
- ಸುಪ್ರೀಂ ಕೋರ್ಟ್ ತನ್ನ 415 ಪುಟಗಳ ತೀರ್ಪು