October 6, 2025
1000694394
ಮಾನ್ವಿ: ಪಟ್ಟಣದ ಅಲ್-ಹಿರಾ ಅಲ್ಪಸಂಖ್ಯಾತ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಪ್ರಾರಂಭದ ಅಂಗವಾಗಿ ಇಂದು ಭಾವಪೂರ್ಣ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಅಧ್ಯಕ್ಷರಾದ ಸೈಯದ್ ಅಕ್ಬರ್ ಪಾಷಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಗುರುಗಳಿಂದ ಜ್ಞಾನವನ್ನು ಪಡೆದುಕೊಂಡು ಜೀವನದಲ್ಲಿ ಉನ್ನತ ವ್ಯಕ್ತಿಗಳಾಗಿ ಸಮಾಜಕ್ಕೆ ಹಾಗೂ ದೇಶಕ್ಕೆ ತಮ್ಮ ಸೇವೆಯನ್ನು ಸಲ್ಲಿಸಬೇಕು ಎಂದು ನುಡಿದರು.
ಶಾಲೆಯ ಕಾರ್ಯದರ್ಶಿ ಶೇಕ್ ಫರೀದ್ ಉಮರಿ ಕೂಡ ಉಪಸ್ಥಿತರಿದ್ದು, ಮಕ್ಕಳಿಗೆ ಆತ್ಮೀಯವಾಗಿ ಸ್ವಾಗತ ಕೋರಿ, ಶಾಲೆಯ ನೂತನ ಶೈಕ್ಷಣಿಕ ವರ್ಷದ ಆರಂಭಕ್ಕೆ ಶುಭಾಶಯಗಳನ್ನು ಕೋರಿದರು.
ಶಾಲಾ ಕಟ್ಟಡವನ್ನು ಆಕರ್ಷಕ ತೋರಣಗಳಿಂದ ಅಲಂಕರಿಸಲಾಗಿದ್ದು, “ಬ್ಯಾಕ್ ಟು ಸ್ಕೂಲ್” ಬೋರ್ಡ್, ವೆಲ್ಕಮ್ ಫ್ರೇಮ್ ಮುಂತಾದ ಸೃಜನಶೀಲ ಅಲಂಕಾರಗಳು ಮಕ್ಕಳ ಗಮನ ಸೆಳೆದವು. ಮಕ್ಕಳನ್ನು ಇವುಗಳಿಗೆ ಪರಿಚಯಿಸಿ, ಅವರೊಂದಿಗೆ ನೆನಪಿನ ಫೋಟೋ ಕ್ಲಿಕ್ಕಿಸಲು ಅವಕಾಶ ಕಲ್ಪಿಸಲಾಗಿತ್ತು.
ಕಾರ್ಯಕ್ರಮದ ಸಂದರ್ಭದಲ್ಲಿ ಶಿಕ್ಷಕ ವರ್ಗದವರು ಮಕ್ಕಳಿಗೆ ಮತ್ತು ಪಾಲಕರಿಗೆ ಶಾಲೆಯ ಕಾರ್ಯವಿಧಾನ, ಈ ಶೈಕ್ಷಣಿಕ ವರ್ಷದ ಹೊಸ ನಿಯಮಗಳು ಹಾಗೂ ನಡೆಯಲಿರುವ ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಶಾಲಾ ಆಡಳಿತ ಮಂಡಳಿ ಎಲ್ಲಾ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಒದಗಿಸುವಲ್ಲಿ ಬದ್ಧವಾಗಿದೆ ಎಂದು ಪುನರುಚ್ಚರಿಸಿತು. ಮಕ್ಕಳ ಹಿತದೃಷ್ಟಿಯಿಂದ ನೂತನ ಕಾರ್ಯಕ್ರಮಗಳು ಮತ್ತು ಕಲಿಕಾ ವಿಧಾನಗಳನ್ನು ಜಾರಿಗೆ ತರಲಾಗುತ್ತಿರುವುದಾಗಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಮೊಹಮ್ಮದ್ ಬಾಬರ್ ಸಂತ ರಾಶಿ, ಶಿಕ್ಷಕರಾದ ಹಾಫಿಜ್ ಇಕ್ರಮುದ್ದೀನ್, ಮೊಹಮ್ಮದ್ ಖಲೀಲ್, ಅನ್ವರ್ ಬಾನು, ರೂಬಿನ, ಶೀಲಾ, ಕುಮಾರಿ ಯಶೋಧ, ಕುಮಾರಿ ಹರಿಷಿಯ, ಕುಮಾರಿ ಹಲೀಮಾ ಹಾಗೂ ಇತರೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!